ಆಕ್ಟನ್ ಲಾರ್ಡ್
(1834-1902). 19ನೆಯ ಶತಮಾನದ ಪ್ರಪಂಚದ ಪ್ರಜ್ಞಾಶಾಲಿಗಳಲ್ಲಿ ಅದ್ವಿತೀಯ. ನೇಪಲ್ಸ್‍ನಲ್ಲಿ ಜನಿಸಿ ಪ್ಯಾರಿಸ್, ಮ್ಯೂನಿಚ್, ಎಡಿನ್‍ಬರೊ ವಿಶ್ವವಿದ್ಯಾನಿಲಯಗಳಲ್ಲಿ ಗೌರವ ಪ್ರಶಸ್ತಿಗಳನ್ನು ಪಡೆದ. ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಆಧುನಿಕ ಇತಿಹಾಸದ ಪ್ರಾಧ್ಯಾಪಕನಾಗಿದ್ದ (1895-1902). ಸ್ವತಃ ಪತ್ರಿಕೋದ್ಯೋಗಿಯಾಗಿದ್ದ. ಸಾಧಾರಣವಾದ ಅವನ ಬರೆವಣಿಗೆಗಳು ಅವನ ಪಾಂಡಿತ್ಯವನ್ನೂ ವಿಮರ್ಶನಾ ಶಕ್ತಿಯನ್ನೂ ತೋರಿಸುತ್ತವೆ. ಅವನ ಅಭಿಪ್ರಾಯವನ್ನು ಒಪ್ಪದೆ ಇದ್ದವರೂ ಆತ 19ನೆಯ ಶತಮಾನದ ಪಾಶ್ಚಾತ್ಯ ಸಂಸ್ಕøತಿಯ ಶ್ರೇಷ್ಠ ಮಾದರಿ ಎಂದು ಗೌರವಿಸುತ್ತಿದ್ದರು. ರಾಜಕೀಯದಲ್ಲಿ ವೈಜ್ಞಾನಿಕ ವಿಚಾರಣೆ ಮತ್ತು ನ್ಯಾಯ ಪ್ರಮಾಣ ಇರಬೇಕೆಂದು ಆತ ಉಪದೇಶಿಸಿದ, ಆತ ಯಾವುದರಲ್ಲೂ ಪೂರ್ವಗ್ರಹಪೀಡಿತನಾಗಿರಲಿಲ್ಲ. ಅವನ ವಿಷಯಜ್ಞಾನ ಸ್ಪಷ್ಟವಾಗಿರುತ್ತಿತ್ತು. ಆದ್ದರಿಂದ ನ್ಯಾಯಾಧೀಶನಂತೆ ತೀರ್ಮಾನಿಸುತ್ತಿದ್ದ. ರಾಜಕೀಯ ಒಂದು ಆಟವೆಂದೂ ಸತ್ಯದ ವಿಚಾರದಲ್ಲಿ ರಮಿಸುವುದು, ಕ್ಷುಲ್ಲಕ ಉದ್ದೇಶ-ಇವು ಆತನ ದೃಷ್ಟಿಯಲ್ಲಿ ದೊಡ್ಡ ಅಪರಾಧ. ಅವನ ಇಂಥ ಉತ್ಕøಷ್ಟ ಮನೋಭಾವನೆ ಗ್ಲಾಡ್‍ಸ್ಟನ್‍ನನ್ನೂ ಆಕರ್ಷಿಸಿತು. ಆಕ್ಟನ್ ನಿಷ್ಪಕ್ಷಪಾತ ಪ್ರಜ್ಞಾಶಾಲಿಯಾಗಿ, ಧರ್ಮವಿಚಾರದಲ್ಲಿ ಸತ್ಯಸ್ಥಿತಿಯನ್ನು ತೋರಿಸಿದ್ದಾನೆ. ಮುಖ್ಯವಾಗಿ ನೈತಿಕ ದೃಷ್ಟಿಯನ್ನೂ ಬೆಳೆಸಬೇಕೆಂದೂ ಜ್ಞಾನ ದುರಭಿಮಾನಕ್ಕೆ ಅವಕಾಶ ಕೊಡಬಾರದೆಂಬುದೂ ಆತನ ಆಶಯ. ಮಾನವನಿಗೆ ಸ್ವಾತಂತ್ರ್ಯ ಮುಖ್ಯವೆಂಬುದೂ ಸಮಾನತೆಗಿಂತ ವ್ಯವಸ್ಥಾಬದ್ಧ ಪ್ರಭುತ್ವ ಒಳ್ಳೆಯದೆಂಬುದೂ ಆತನ ಅಭಿಪ್ರಾಯ. ಬಹುಮತದ ಆಡಳಿತ ನಿರಂಕುಶಾಧಿಕಾರಕ್ಕೆ ಅವಕಾಶ ಕೊಡುವುದೆಂದು ಆತ ಹೇಳಿದ್ದಾನೆ.

ಸುಸಂಸ್ಕøತನಾಗಿ, ಪಾಂಡಿತ್ಯ ಪಡೆದವನಾಗಿ ವಿಶ್ವಪ್ರಜೆಯಾಗಿ ವ್ಯಾಪಕವಾಗಿ ಪ್ರಯಾಣ ಮಾಡಿದ ಆಕ್ಟನ್ ತನ್ನ ಜೀವನದ ಬಹುಕಾಲವನ್ನು ಯೂರೋಪ್ ಮತ್ತು ಅಮೆರಿಕ ದೇಶಗಳಲ್ಲಿ ಕಳೆದ. 1859ರಲ್ಲಿ ಬ್ರಿಟನ್ನಿನ ಪಾರ್ಲಿಮೆಂಟಿಗೆ ಚುನಾಯಿತನಾಗಿ ಅದೇ ವರ್ಷ ರೋಮನ್ ಕ್ಯಾಥೋಲಿಕ್ಕರ ದಿ ರ್ಯಾಂಬ್ಲರ್ ಎಂಬ ಮಾಸಪತ್ರಿಕೆಯ ಸಂಪಾದಕನಾದ. ಪೋಪ್ ಪಯಸ್‍ಗೂ ಇವನಿಗೂ ಭಿನ್ನಾಭಿಪ್ರಾಯಗಳುಂಟಾದುದರಿಂದ ಪತ್ರಿಕೆಯ ಸಂಪಾದಕತ್ವವನ್ನು ಬಿಟ್ಟುಬಿಟ್ಟ. ತನ್ನ ಧಾರ್ಮಿಕ ಕಾರ್ಯವನ್ನು ಬದಿಗೊತ್ತಿ ಪೋಪ್ ಲೌಕಿಕ ಅಧಿಕಾರದಲ್ಲಿ ಕೈ ಹಾಕುವುದನ್ನು ಉಗ್ರವಾಗಿ ವಿರೋಧಿಸಿದ. 1869ರಲ್ಲಿ ಗ್ಲಾಡ್‍ಸ್ಟನ್ ಆಕ್ಟನ್ನನಿಗೆ ಇಂಗ್ಲೆಂಡಿನ ಹೌಸ್ ಆಫ್ ಲಾಡ್ರ್ಸ್ ಸಭೆಯ ಶ್ರೀಮಂತ ಪದವಿ ಕೊಡಿಸಿದ.

ಲಾರ್ಡ್ ಆಕ್ಟನ್ ಸ್ವಾತಂತ್ರ್ಯಪ್ರಿಯ ವ್ಯಕ್ತಿ. ತನ್ನ 44ನೆಯ ವಯಸ್ಸಿನಲ್ಲಿ ಬರೆದ ಡೆಮಾಕ್ರಸಿ ಇನ್ ಯೂರೋಪ್ ಎಂಬ ದೊಡ್ಡ ಪ್ರಬಂಧವೂ ಮಾನವ ಸ್ವಾತಂತ್ರ್ಯದ ವಿಷಯವಾಗಿ ಕೊಟ್ಟ ಎರಡು ಉಪನ್ಯಾಸಗಳು ಅವನಿಗೆ ಕೀರ್ತಿ ತಂದುವು. ಆಧುನಿಕ ರಾಜ್ಯಗಳಲ್ಲಿ ಕೇಂದ್ರೀಕೃತವಾದ ಅಧಿಕಾರದ ದುಷ್ಪರಿಣಾಮಗಳನ್ನೂ ಪ್ರಜಾಪ್ರಭುತ್ವ ಮತ್ತು ಸಮಷ್ಟಿವಾದದಲ್ಲಿ ಅಡಕವಾಗಿರುವ ಸ್ವಾತಂತ್ರ್ಯದ ಅಪಾಯಗಳನ್ನೂ ಕಂಡು ಜಾತೀಯತೆ ಮತ್ತು ರಾಷ್ಟ್ರೀಯತೆಗಳನ್ನು ಖಂಡಿಸಿದ. ಸ್ವಾತಂತ್ರ್ಯತತ್ತ್ವ ಅತಿ ಪ್ರಿಯವಾದ ವಿಷಯವಾಗಿದ್ದುದರಿಂದ ಪ್ರಜಾಪ್ರಭುತ್ವವನ್ನು ಹತೋಟಿಯಲ್ಲಿಟ್ಟುಕೊಳ್ಳದೆ ಹೋದರೆ ಸ್ವಾತಂತ್ರ್ಯ ನಾಶವಾಗುವುದೆಂದು ತಿಳಿಸಿದ. ಅಲ್ಪಸಂಖ್ಯಾತರು ಅನುಭವಿಸುವ ಭದ್ರತೆ ಅಥವಾ ರಕ್ಷಣೆಯ ಪರಿಮಾಣವೇ ಒಂದು ದೇಶದ ಸ್ವಾತಂತ್ರ್ಯ ಪರೀಕ್ಷಾ ಸಾಧನವೆಂದು ಅವನ ಅಭಿಪ್ರಾಯವಾಗಿತ್ತು. ಇತಿಹಾಸದ ಹಾಗೆ ರಾಜಕೀಯ ಅಭಿಪ್ರಾಯದಲ್ಲೂ ನೀತಿನಿಯಮವಿರಬೇಕೆಂಬುದು ಅವನ ವಾದ. ಒಟ್ಟಿನಲ್ಲಿ ಲಾರ್ಡ್ ಆಕ್ಟನ್ ದುಷ್ಟ ರಾಜ್ಯವನ್ನು ಪ್ರತಿಭಟಿಸಿದ ಆಧುನಿಕ ತತ್ತ್ವಜ್ಞ.		  	   
(ಎನ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ